ಬೆಳ್ತಂಗಡಿ, ಡಿ. 15: ಯಕ್ಷಗಾನಕ್ಕೆ ಹೊಸ ಕಲ್ಪನೆ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ ಶೆಟ್ಟಿ ಅವರು. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಬೆಳ್ತಂಗಡಿ ಘಟಕದಿಂದ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಜರಗಿದ ಯಕ್ಷ ಸಂಭ್ರಮ-2024 ಪ್ರಶಸ್ತಿ ಪ್ರದಾನ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನವನ್ನು ಈ ರೀತಿಯೂ ನಡೆಸಬಹುದು ಎಂಬ ಕಲ್ಪನೆ ಬೆಳ್ತಂಗಡಿಗೆ ನೀಡುವ ಮೂಲಕ ಬೆಳ್ತಂಗಡಿಯ ಜನತೆ ಹಿಂದೆಂದೂ ಕಂಡರಿಯದಂತಹ ಯಕ್ಷ ಲೋಕಕ್ಕೆ ಕರೆದೊಯ್ದಿದ್ದಾರೆ. ಯಕ್ಷಗಾನ ಕಲೆಯ ಮೂಲಕ ಎಲ್ಲ ಜಾತಿ, ಧರ್ಮವನ್ನು ಒಗ್ಗೂಡಿಸುವ ಕೆಲಸವಾಗಿದೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, 25 ವರ್ಷದ ವೃತ್ತಿ ಜೀವನದ ಇತಿಹಾಸದಲ್ಲಿ ಯಕ್ಷಗಾನಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಸಂಯೋಜಿಸಿರುವುದು ಇದೇ ಪ್ರಥಮ. ಕರ್ನಾಟಕದಾದ್ಯಂತ ನಮ್ಮ ಫೌಂಡೇಶನ್ ನಿಂದ 9 ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯಲ್ಲಿ ನಿರತರಾಗಿದ್ದಾರೆ ಎಂದರು.
ನಟ ರಾಜ್ ಬಿ.ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಸಂಸ್ಕೃತಿ ಸಂಸ್ಕಾರ ಉಳಿಸಿ, ಬೆಳೆಸುವ ಮನಸ್ಸುಗಳು ನಮಗೆ ಬೇಕು. ಅದು ಕರಾವಳಿಯಲ್ಲಿ ಜೀವಂತವಾಗಿದೆ ಎಂಬುದಕ್ಕೆ ಯಕ್ಷಸಂಭ್ರಮ ಸಾಕ್ಷಿ ಎಂದರು. ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಘಟಕ ಗೌರವಾಧ್ಯಕ್ಷ ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ಓರ್ವ ಕಲಾವಿದನೇ ಇನ್ನೋರ್ವ ಕಲಾವಿದನ ಪರಿಸ್ಥಿತಿ ತಿಳಿಯಲು ಸಾಧ್ಯ.
ಪಟ್ಲ ಘಟಕವು 10 ವರ್ಷ ಪೂರೈಸುವ ಸಂದರ್ಭದಲ್ಲಿ ಕಲಾವಿದರ ನೆರವಿಗಾಗಿ 10 ಕೋ.ರೂ. ಸಂಗ್ರಹಿಸುವ ಗುರಿ ಹೊಂದಿದೆ ಎಂದರು. ನಟಿ ಸಂಯುಕ್ತ ಹೊರನಾಡು, ಅಮೆರಿಕ ಉದ್ಯಮಿ ಮಂಜುನಾಥ್ ಶೆಟ್ಟಿ ಪಟ್ಟ ದಿಲ್ಲಿ ಘಟಕ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ, ಕೇಂದ್ರ ಸಮಿತಿ ಪುರುಷೋತ್ತಮ ಅಡ್ಯಾರ, ಕೇಂದ್ರ ಸಮಿತಿ ಕೋಶಾಧಿಕಾರಿ ಸುದೇಶ್, ರವಿಚಂದ್ರ ಶೆಟ್ಟಿ ಪಟ್ಲ ಮಹಬಲ ರೈ, ಮುನಿಯಾಲು ಉದಯ ಕುಮಾರ ಶೆಟ್ಟಿ ಘಟಕದ ಕಾರ್ಯದರ್ಶಿ ಶಿತಿಕಂಠ ಭಟ್, ಕೋಶಾಕಾರಿ ಆದರ್ಶ್ ಜೈನ್, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು. ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಲ್ಯಾಲ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು. ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.