ಸರಕಾರಿ ಪ್ರೌಢ ಶಾಲೆ ಕಡೇಶಿವಾಲಯ ಬಂಟ್ವಾಳ ತಾಲೂಕು ಯಕ್ಷಧ್ರುವ ಯಕ್ಷ ಶಿಕ್ಷಣ ಉದ್ಘಾಟನಾ ಸಮಾರಂಭ ಇಂದು ನಡೆಯಿತು.
ಯಕ್ಷಗಾನ ಕಲೆ ನಮ್ಮಲ್ಲಿ ನೈತಿಕತೆ ಮತ್ತು ಬೌದ್ಧಿಕ ಮಟ್ಟವನ್ನು ಹೆಚ್ಚಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರು, ಪಟ್ಲ ಫೌಂಡೇಶನ್, ಸರಪಾಡಿ ಘಟಕದ ಸಂಚಾಲಕರಾದ ಶ್ರೀ ಸರಪಾಡಿ ಅಶೋಕ ಶೆಟ್ಟಿ ಯವರು ಹೇಳಿದರು.
ಸರಕಾರಿ ಪ್ರೌಢಶಾಲೆ, ಕಡೇಶಿವಾಲಯ ಇಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ “ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿ” ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಯಕ್ಷಗಾನ ಕಲಿಯುವಿಕೆ ಆರಂಭ ಶೂರತನವಾಗದೆ, ನಿರಂತರ ವಾಗಿರಬೇಕು. ಆ ಮೂಲಕ ಮುಂದೆ ಪ್ರಬುದ್ಧ ಕಲಾವಿದರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಯಕ್ಷಗಾನ ಗುರು ಶ್ರೀ ಸತೀಶ್ ಆಚಾರ್ಯ ಮಾಣಿ ಮಾತನಾಡಿ, ಪಟ್ಲ ಫೌಂಡೇಶನ್ ನ ವತಿಯಿಂದ ನಡೆಯುವ ಈ ಉಚಿತ ಯಕ್ಷ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಶ್ರೀ ತಿರುಮಲೇಶ್ವರ ಭಟ್, ಮಾತನಾಡಿ ಯಕ್ಷ ತರಬೇತಿಗೆ ಸೇರಿದ ಎಲ್ಲಾ 62 ವಿದ್ಯಾರ್ಥಿಗಳು ಈ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಪಡೆದುಕೊಂಡು ಸುಸಂಸ್ಕೃತ ಕಲಾವಿದರಾಗಿ ಎಂದು ಹಾರೈಸಿದರು. ಯಕ್ಷಗಾನ ನೃತ್ಯ ತರಬೇತಿಗೆ ಸ್ಥಳಾವಕಾಶ ಮಾಡಿಕೊಟ್ಟ ರೋಟರಿ ಗ್ರಾಮೀಣ ದಳ ಕಡೇಶಿವಾಲಯದ ಅಧ್ಯಕ್ಷ ಕಿಶೋರ್ ಕುಮಾರ್, ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು ಲೋಕನಾಥ ತಿಮರಾಜೆ ಮತ್ತು ಕಮಲಾಕ್ಷ ಪೂಜಾರಿ ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕಿ ವಸಂತಿ.ಎಲ್ ನಿರೂಪಿಸಿ, ಮುಖ್ಯ ಶಿಕ್ಷಕ ಲೋಕಾನಂದ. ಎನ್. ಸ್ವಾಗತಿಸಿ, ಸಹಶಿಕ್ಷಕಿ ಗೀತಾ ಕುಮಾರಿ ವಂದನಾರ್ಪಣೆಗೈದರು. ಶಾಲಾ ಶಿಕ್ಷಕವೃಂದದವರು ಸಹಕರಿಸಿದರು.