yakshadhruvapatlafoundation.org

ಕಾರ್ಕಳ : ಇಂದಿನ ಹೆಸರುವಾಸಿ ಕಲಾವಿದರ ಹಿಂದೆ ಒಂದು ದಿನ ಕಳೆಯುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಯಕ್ಷಗಾನ ಕ್ಷೇತ್ರದಲ್ಲಿ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಕಲಾವಿದರ ಕಷ್ಟವನ್ನು ಬಹಳ ಹತ್ತಿರದಿಂದ ಗಮನಿಸಿದವ ನಾನು. ಕಲಾವಿದರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಪ್ರಾರಂಭಿಸಲಾಯಿತು. ಟ್ರಸ್ಟ್‌ನ ಕಾರ್ಯವೈಖರಿಯಲ್ಲಿ ನಾನು ಕೇವಲ ನಿಮಿತ್ತ, ಎಲ್ಲವೂ ಕಟೀಲು ಅಮ್ಮನವರ ಕೃಪೆ. ಹೃದಯ ಶ್ರೀಮಂತ ದಾನಿಗಳಿಂದ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕಲಾಸೇವೆಯಲ್ಲಿ ಮುಂದುವರೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಅಭಿಪ್ರಾಯಪಟ್ಟರು.

ಅವರು ನ. 2ರಂದು ಗೋವಾ ಪಣಜಿ ಇನ್ಸಿಟ್ಯೂಟ್‌ ಮೆನೆಜಸ್‌ ಬ್ರಗಾನ್ಸಾ ಸಭಾಗೃಹದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಗೋವಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಕ್ಷಗಾನದಿಂದ ಸಂಸ್ಕಾರ – ಗುರುರಾಜ್‌ ಗಂಟಿಹೊಳೆ
ಕಾರ್ಯಕ್ರಮ ಉದ್ಘಾಟಿಸಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಮಾತನಾಡಿ, ಯಕ್ಷಗಾನ ನಮ್ಮ ಕರಾವಳಿಗೆ ದೇವರು ನೀಡಿದ ಕಾಣಿಕೆ. ಯಕ್ಷಗಾನ ಸಂಸ್ಕಾರವನ್ನು ಕಲಿಸುತ್ತದೆ. ಇದು ಒಳಿತು- ಕೆಡುಕಿನ ಅರಿವನ್ನು ಜನರಿಗೆ ಬೋಧಿಸುತ್ತದೆ. ಯಕ್ಷಗಾನ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಘನತೆಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಪಟ್ಲ ಫೌಂಡೇಶನ್‌ ಕಾರ್ಯಕ್ರಮಗಳೇ ಸಾಕ್ಷಿ ಎಂದರು.

ಗೌರವಾರ್ಪಣೆ
ಕಂಬಳ ಕ್ಷೇತ್ರದ ಸಾಧನೆಗಾಗಿ ಸದಾನಂದ ಶೆಟ್ಟಿ ಬೆಳುವಾಯಿ ಹಾಗೂ ಅಶೋಕ್‌ ಶೆಟ್ಟಿ ಬೇಲಾಡಿ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಜಯ ಶೆಟ್ಟಿ ಗೋವಾ, ಯಕ್ಷಗಾನ ಭಾಗವತ ಸದಾಶಿವ ಅಮಿನ್‌ ಕೊಕ್ಕರ್ಣೆ, ಯಕ್ಷಗಾನ ಕಲಾವಿದರಾದ ಸತೀಶ್ ಮೊಗವೀರ ಹಾಲಾಡಿ, ವಿಶ್ವನಾಥ ಪೂಜಾರಿ‌ ಎಣ್ಣೆಬೈಲು, ರಾಕೇಶ್‌ ಶೆಟ್ಟಿ ಮೇಘರವಳ್ಳಿ, ನವೀನ್‌ ಶಾನುಭೋಗ್‌, ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಉಪ್ಪುಂದ ನಾಗೇಂದ್ರ ರಾವ್‌, ಸತೀಶ್‌ ಶೆಟ್ಟಿ ಪಟ್ಲ ಹಾಗೂ ಶಶಿಧರ್‌ ಶೆಟ್ಟಿ ಬರೋಡಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ದೇಣಿಗೆ ಹಸ್ತಾಂತರ
ಗೋವಾ ಘಟಕದಿಂದ ಪಟ್ಲ ಫೌಂಡೇಶನ್‌ನ ಕೇಂದ್ರ ಘಟಕಕ್ಕೆ 1 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಗೋವಾ ಘಟಕದ ಗೌರವಾಧ್ಯಕ್ಷ ವಿಜಯೇಂದ್ರ ಶೆಟ್ಟಿ ದಂಪತಿಯನ್ನು ಹಾಗೂ ಅಧ್ಯಕ್ಷ ಗಣೇಶ್‌ ಶೆಟ್ಟಿ ಇರ್ವತ್ತೂರು ದಂಪತಿಯನ್ನು ಅಭಿನಂದಿಸಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಪ್ರಧಾನ ಸಂಚಾಲಕ, ತುಳುಕೂಟ ಬರೋಡದ ಅಧ್ಯಕ್ಷ ಶಶಿಧರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಘಟಕದ ಅಧ್ಯಕ್ಷ ತಾರನಾಥ ಶೆಟ್ಟಿ, ಗುಜರಾತ್‌ ಘಟಕದ ಅಜಿತ್‌ ಶೆಟ್ಟಿ, ಗೋವಾ ಬಂಟರ ಸಂಘದ ಅಧ್ಯಕ್ಷ ಶಶಿಧರ್‌ ನಾಯಕ್‌, ಬಿಲ್ಲವ ಸಂಘದ ಅಧ್ಯಕ್ಷ ನಾಗೇಶ್‌ ಪೂಜಾರಿ, ಆರ್‌ಎಸ್‌ಎಸ್‌ ಗೋವಾ ವಿಭಾಗದ ಸಂಘ ಸಂಚಾಲಕ್‌ ಸಿಎ ರಾಜೇಂದ್ರ ಬೊಬೈ, ನಾರಾಯಣಗುರು ಸೇವಾ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ್‌ ಪೂಜಾರಿ, ಕೋಶಾಧಿಕಾರಿ ಸುದೇಶ್‌ ಕುಮಾರ್‌ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಜಗನ್ನಾಥ ಶೆಟ್ಟಿ, ಪ್ರದೀಪ್‌ ಆಳ್ವ, ಪ್ರಸನ್ನ ಶೆಟ್ಟಿ ಬೈಲೂರು, ಪಳ್ಳಿ ಘಟಕದ ಅಧ್ಯಕ್ಷ ಸುನಿಲ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ಕರ್ನೂರು ಸುಭಾಷ್‌ ರೈ, ಗೋವಾ ಘಟಕದ ಕಾರ್ಯದರ್ಶಿ ಸುನಿಲ್‌, ಖಜಾಂಚಿ ಮೋಹನ್‌ದಾಸ್ ಶೆಟ್ಟಿ, ಸಂಚಾಲಕ ಅಶೋಕ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಆನಂದ್ ಶೆಟ್ಟಿ ಮತ್ತು ಬಳಗದವರು ಪ್ರಾರ್ಥಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಗೋವಾ ಘಟಕದ ಅಧ್ಯಕ್ಷ ಗಣೇಶ್‌ ಶೆಟ್ಟಿ ಇರ್ವತ್ತೂರು ಸ್ವಾಗತಿಸಿ, ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿ, ವಂದಿಸಿದರು.

Source: newskarkala

Leave a Reply

Your email address will not be published. Required fields are marked *