ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬಹರೈನ್ ಮತ್ತು ಸೌದಿ ಘಟಕದ ನಾಲ್ಕನೇ ವಾರ್ಷಿಕೋತ್ಸವ ಸಂಭ್ರಮ ನವೆಂಬರ್ 1ರಂದು ಬಹರೈನ್ ಮನಾಮದ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.
ಘಟಕದ ಖಜಾಂಚಿ ನವೀನ್ ಭಂಡಾರಿಯವರು ಬಂದ ಅತಿಥಿಗಳನ್ನು ಆದರದಿಂದ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪಟ್ಟ ಸತೀಶ್ ಶೆಟ್ಟಿ, ಬಹರೈನ್ ಮತ್ತು ಸೌದಿ ಘಟಕದ ಅಧ್ಯಕ್ಷ ನರೇಂದ್ರ ಶೆಟ್ಟಿ, ಘಟಕದ ಗೌರವ ಅಧ್ಯಕ್ಷ ಮತ್ತು ಮುಖ್ಯ ಅತಿಥಿ ಸುಭಾಷ್ ಚಂದ್ರ, ಘಟಕದ ಪೂರ್ವ ಅಧ್ಯಕ್ಷ ರಾಜೇಶ್ ಶೆಟ್ಟಿ, ಕನ್ನಡದ ಸಂಘ ಬಹರೈನ್ ಇದರ ಅಧ್ಯಕ್ಷ ಅಮರನಾಥ್ ರೈ, ಮಂಗಳೂರು ಅಸೋಸಿಯೇಷನ್ ಸ‍್ವದಿ ಆರೇಬಿಯಾ ಇದರ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮತ್ತು ಇತರ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮದ ಪ್ರಧಾನ ಅಂಗವಾಗಿ ಯಕ್ಷಗುರು ದೀಪಕ್ ರಾವ್ ಪೇಜಾವರ್ ನಿರ್ದೇಶನದ ‘ಚಕ್ರವ್ಯೂಹ’ ಎಂಬ ಯಕ್ಷಗಾನ ಕಥಾ ಪ್ರಸಂಗವನ್ನು ನಾಡಿನಿಂದ ಬಂದ ಅತಿಥಿ ಕಲಾವಿದರು ಮತ್ತು ಬಹರೈನ್ ಮತ್ತು ಸೌದಿ ಅರೇಬಿಯಾದ ಕಲಾವಿದರು ಜೊತೆಗೂಡಿ ಆಡಿ ತೋರಿಸಿದರು. ಯಕ್ಷಗಾನದ ಮುಖ್ಯ ಆಕರ್ಷಣೆ ನಾಡಿನಿಂದ ಆಗಮಿಸಿದ ಖ್ಯಾತ ಪುಂಡು ವೇಷದಾರಿ ದಿವಾಕರ್ ರೈ ಸಂಪಾಂಜೆ ಅವರ ಅಭಿಮನ್ಯು ಪಾತ್ರವಾಗಿತ್ತು. ಪಟ್ಟ ಸತೀಶ್ ಶೆಟ್ಟಿ ಮತ್ತು ಸೌದಿ ಅರೇಬಿಯಾದ ರೋಷನ್ ಕೋಟ್ಯಾನ್ ಅವರ ಭಾಗವತಿಕೆ ಕೂಡ ನಡೆಯಿತು.
ಈ ಮನಮೋಹಕ ಯಕ್ಷಗಾನ ಪ್ರದರ್ಶನದ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಕಲಾವಿದ ಮತ್ತು ಯಕ್ಷಗುರು ದೀಪಕ್ ರಾವ್ ಪೇಜಾವರ್ ಅವರು ನಡೆಸಿಕೊಟ್ಟರು.
ಪ್ರಾಸ್ತಾವಿಕ ಭಾಷಣ ಮಾಡಿದ ಘಟಕದ ಅಧ್ಯಕ್ಷರಾದ ನರೇಂದ್ರ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ಘಟಕವು ಮಾತ್ರ ಸಂಸ್ಥೆಯ ಸೇವಾ ಕಾರ್ಯಕ್ರಮಗಳಿಂದ ಸ್ಪೂರ್ತಿಗೊಂಡು ಬಹರೈನ್‌ನಲ್ಲಿ ಯಶಸ್ವಿ ರಕ್ತದಾನ ಶಿಬಿರವನ್ನು ನಡೆಸಿ ಕರ್ಮಭೂಮಿಯ ಸೇವೆಯನ್ನು ಮಾಡಿದೆ. ಇಂದು ಮಾತೃಸಂಘದ ಜೊತೆಗೂಡಿ ಹಲವು ಅಶಕ್ತ ಕಲಾವಿದರ ಸೇವೆಯನ್ನು ಮಾಡಲಿದೆ. ಈವಾಗ ಯಕ್ಷಗಾನವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಈ ಪರಿವರ್ತನೆಗೆ ಮುಖ್ಯ ಕಾರಣಿಭೂತರು ಸತೀಶಣ್ಣ ಮತ್ತೆ ಪಟ್ಲ ಫೌಂಡೇಷನ್ ಎಂದು ಹೇಳಿದರೆ ತಪ್ಪಾಗಲಾರದು. ಅವರು ಯಕ್ಷಗಾನವನ್ನು ಒಂದು ಉನ್ನತ ಕಲಾಪ್ರದರ್ಶನದ ರೂಪದಲ್ಲಿ ವಿಶ್ವದಾದ್ಯಂತ ಬಿಂಬಿಸಿ ಪ್ರದರ್ಶಿಸುವುದರಲ್ಲಿ ಸಫಲರಾಗಿದ್ದಾರೆ. ಅದರ ಪರಿಕ್ರಮದ ಪ್ರತಿಫಲ ನಮಗೆ ಸಿಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾದ ಸುಭಾಷ್ ಚಂದ್ರ ಮಾತನಾಡಿ ‘ಸತೀಶಣ್ಣ ಸರಳ ಸಜ್ಜನಿಕೆಯ ಜೀವನವನ್ನು ನಡೆಸಿಕೊಂಡು ಪರೋಪಕಾರವನ್ನು ಮಾಡುತ್ತಾ ವಿಶ್ವದಾದ್ಯಂತ ಹೆಸರುವಾಸಿ ಆಗಿದ್ದಾರೆ. ಸತೀಶಣ್ಣ ಮತ್ತು ಅವರ ಪಟ್ಲ ಫೌಂಡೇಶನ್ ಗೆ ನಮ್ಮ ಘಟಕದ ಸಮರ್ಥನೆ ಯಾವಾಗಲೂ ಇದೆ ಎಂದರು.
ಪಟ್ಟ ಸತೀಶ್ ಶೆಟ್ಟಿಯವರು ಮಾತನಾಡಿ ‘ಪಟ್ಲ ಫೌಂಡೇಶನ್ ಕಳೆದ 10 ವರ್ಷಗಳಿಂದ ಅಸಕ್ತ ಕಲಾವಿದರ ಸೇವೆಯನ್ನು ಮಾಡುತ್ತಾ ಬಂದಿದೆ. ಎಲ್ಲರ ಸಹಯೋಗದೊಂದಿಗೆ ಆ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು ಮತ್ತು ಬಹರಿನ್ ಮತ್ತು ಸೌದಿ ಘಟಕವು ಮಾತೃಸಂಸ್ಥೆಗೆ ನೀಡುವ ಸಹಯೋಗಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಮಾರಂಭದ ಅಧ್ಯಕರಾದ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾದ ಸುಭಾಷ್ ಚಂದ್ರ, ಯಕ್ಷ ಪೋಷಕ ಮತ್ತು ಸೆಂಟ್ರಲ್ ಕೆಫೆ ಪ್ರಕಾಶ್ ಶೆಟ್ಟಿ, ಘಟಕದ ಅಧ್ಯಕ್ಷ ನರೇಂದ್ರ ಶೆಟ್ಟಿ, ಭಾಗವತ ರೋಷನ್ ಕೋಟ್ಯಾನ್ ಅವರ ಪೋಷಕರಿಗೆ ಮತ್ತು ಅತಿಥಿ ಕಲಾವಿದ ದಿವಾಕರ್ ರೈ ಸಂಪಾಂಜೆ ಇವರಿಗೆ ಶಾಲು ಹೊದಿಸಿ, ಫಲಪುಷ್ಪ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಲಾವಿದ ದಿವಾಕರ್ ರೈ ಸಂಪಾಂಜೆ ಇವರಿಗೆ ‘ದಿಗಿಣ ಚತುರ’ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಘಟಕದ ವತಿಯಿಂದ ಯಕ್ಷ ಆಶ್ರಯ ಯೋಜನೆ ಅಡಿಯಲ್ಲಿ ಬಡ ಕಲಾವಿದವರಿಗೆ ಒಂದು ಮನೆಯನ್ನು ಕಟ್ಟಿಕೊಡಲು ರೂ.5 ಲಕ್ಷಗಳ ದೇಣಿಗೆಯನ್ನು ನೀಡಲಾಯಿತು. ಘಟಕದ ಅಧ್ಯಕ್ಷ ನರೇಂದ್ರ ಶೆಟ್ಟಿ ಅವರ ವತಿಯಿಂದ ಏಳು ಆಸಕ್ತ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಕಲಾವಿದರ ಸಹಾಯಕ್ಕಾಗಿ ಪಟ್ಲ ಸಂಭ್ರಮ 2024 ರೂ.1 ಲಕ್ಷ ದೇಣಿಗೆಯನ್ನು ನೀಡಲಾಯಿತು. ನರೇಂದ್ರ ಶೆಟ್ಟಿ ನವೀನ್ ಭಂಡಾರಿ ಮತ್ತು ಗೋಪಾಲ್ ಶೆಟ್ಟಿ ಅವರ ವತಿಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಘಟಕದ ಕಾರ್ಯದರ್ಶಿ ಮೋಹನ್ ಎಡಿನೀರ್ ಅವರು ಎಲ್ಲಾ ಯಕ್ಷಗಾನ ಪ್ರಿಯರಿಗೆ, ಯಕ್ಷಗಾನ ಕಲಾಪೋಷಕರಿಗೆ, ಯಕ್ಷಗಾನ ಕಲಾವಿದರಿಗೆ ಮತ್ತು ಸ್ವಯಂಸೇವಕರಿಗೆ ಧನ್ಯವಾದವನ್ನು ಸಮರ್ಪಿಸಿದರು. ಈ ಸಮಾರಂಭದಲ್ಲಿ ಘಟಕದ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಮತ್ತು ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಸಮಾರಂಭದ ಅನ್ನದಾನದ ವ್ಯವಸ್ಥೆಯನ್ನು ಸೆಂಟ್ರಲ್ ಕೆಫೆ ಪ್ರಕಾಶ್ ಶೆಟ್ಟಿ ಅವರು ತಮ್ಮ ವತಿಯಿಂದ ಏರ್ಪಡಿಸಿದ್ದರು.