ವಿಕ ಸುದ್ದಿಲೋಕ ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರಸಿದ್ದ ಭಾಗವತ ಪಟ್ಲ ಸತೀಶ್ ಶೆಟ್ಟಿ ಕುಟುಂಬದ ಸೇವಾ ಸಂಕಲ್ಪವಾದ ಚಿನ್ನದ ರಥೋತ್ಸವ ಸೇವೆ ಸಕಲ ಧಾರ್ಮಿಕ ವಿಧಿಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು.
ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರುಗಿದವು.
ಅರಿಕೆ ಸಿದ್ದಿಗಾಗಿ ಹರಕೆ: ಹೆಣ್ಣು ಮಗು ಬೇಕೆಂದು ಪಟ್ಲ ಸತೀಶ್ ಶೆಟ್ಟಿ- ನಿರ್ಮಿತಾ ಶೆಟ್ಟಿ ದಂಪತಿಯ ಪ್ರಾಂಜಲ ಮನಸ್ಸಿನ ಪ್ರಾರ್ಥನೆ ಫಲಿಸಿ ಜನಿಸಿದ ಹೆಣ್ಣು ಮಗು ರಿತ್ವಿಕಾ ಹೆಸರಲ್ಲಿ ಸಂಕಲ್ಪ ಮಾಡಿದಂತೆ ದೇವಿ ಭ್ರಮರಾಂಬಿಕೆ ಸನ್ನಿಧಿಯಲ್ಲಿ ಚಿನ್ನದ ರಥೋತ್ಸವ ಸೇವೆ ಸಮರ್ಪಿಸಿದ್ದು ಸಾವಿರಾರು ಜನರು ನೆರೆದಿದ್ದರು.
ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಸುರೇಶ್ ಶೆಟ್ಟಿ ಗುರ್ಮೆ, ಬೆಂಗಳೂರು ಬಿಬಿಎಂಪಿ ಉಪ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಪಾವಂಜೆ ದೇವಸ್ಥಾನದ ಧರ್ಮದರ್ಶಿ ಡಾ. ಯಾಜಿ ನಿರಂಜನ ಭಟ್, ಮೊಕ್ತೇಸರ ಶಶೀಂದ್ರ ಕುಮಾರ್, ಪಟ್ಲ ಗುತ್ತು ಮಹಾಬಲ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ, ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಬರೋಡ ಶಶಿಧರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಎಂಆರ್‌ಜಿ ಗ್ರೂಪ್‌ನ ಪ್ರಕಾಶ್ ಶೆಟ್ಟಿ, ಕೆ.ಎಂ. ಶೆಟ್ಟಿ, ಗಿರೀಶ್ ಎಂ. ಶೆಟ್ಟಿ ಕಟೀಲು ಉಪಸ್ಥಿತರಿದ್ದರು.
ಹಾಡಿದ ಅಪ್ಪ, ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಮಕ್ಕಳು
ಚಿನ್ನದ ರಥೋತ್ಸವದ ಯಕ್ಷನಾಟ್ಯದ ಸುತ್ತಿನ ಸಂದರ್ಭ ಪಟ್ಲ ಸತೀಶ್ ಶೆಟ್ಟಿ ಅವರು ಹಿಮ್ಮೇಳ ಜತೆ ‘ದೇವಿ ನೀ ಪಾಲಿಸಮ್ಮ ಭ್ರಮರಾಂಬಿಕೆಯೆ…ದೇವಿ ನೀ ಪಾಲಿಸಮ್ಮ…ದೇವಿ ನಿತ್ಯಾನಂದೆ… ದೇವಿ ನೀ ಜಗದಂಬೆ…ದೇವಿ ಕಾತ್ಯಾಯಿನಿ… ಭಾವದಿಂದಲಿ ಪೊರೆಯೆ… ದೇವಿ ನೀ ಪಾಲಿಸವ್ವಾ ಭ್ರಮರಾಂಬಿಕೆ… ದೇವಿ ನೀ ಪಾಲಿಸೆಮ್ಮ…’ ಎಂಬ ದೇವಿ ಸ್ತುತಿ ಹಾಗೂ ‘ಧರೆಯೊಳು ಹೆಸರಾಂತ ಕಟೀಲು ಪುರದಲ್ಲಿ ಸ್ಥಿರವಾಗಿ ನೆಲೆಸಿಹ ಭ್ರಮರಾಂಬಿಕೆ…’ ಎಂಬ ಮಂಗಳ ಪದ್ಯಗಳಿಗೆ ವೇಷಧಾರಿಗಳ ಜತೆ ಪಟ್ಲ ಸತೀಶ್ ಶೆಟ್ಟಿ ಅವರ ಪುತ್ರ ಹೃದಾನ್ ಹಾಗೂ ಪುತ್ರಿ ರಿತ್ವಿಕಾ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಗೆಜ್ಜೆಸೇವೆ ನೀಡಿದರು.