ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದಶಮಾನೋತ್ಸವ: ಸಮಾಲೋಚನಾ ಸಭೆ
ಯಕ್ಷಧ್ರುವ ಪಟ್ಲವಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮಾನೋತ್ಸವದ ಕುರಿತು ಸಮಾಲೋಚನಾ ಸಭೆಯು ನಗರದ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಜರುಗಿತು. ಎಂ.ಆರ್.ಜಿ. ಗ್ರೂಫ್ ಚೇರ್ಮನ್ ಡಾ| ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನದ ಕಂಪನ್ನು ದೇಶ ವಿದೇಶಗಳಲ್ಲಿ ಪಸರಿಸುವಂತೆ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿಯವರದ್ದಾಗಿದೆ. ಯಕ್ಷಗಾನ ಕಲಾವಿದರಿಗೆ ಸದಾ ಬೆಂಬಲ ನೀಡುತ್ತಿರುವ ಪಟ್ಟರ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಾಯ ಸಹಕಾರ ನೀಡಬೇಕು. ಜೂ. 1ರಂದು ನಡೆಯಲಿರುವ ದಶಮಾನೋತ್ಸವಕಾರ್ಯಕ್ರಮಅವಿಸ್ಮರಣೀಯವಾಗಿಸಲು ನಾವೆಲ್ಲರೂ ಒಗ್ಗೂಡಿ ದುಡಿಯಬೇಕು ಎಂದರು.
ಟ್ರಸ್ಟ್‌ನ ಮಹಾದಾನಿ, ಮುಂಬಯಿಯ ಹೇರಂಭ ಇಂಡಸ್ಟ್ರಿಸ್ ಕಾರ್ಯ ನಿರ್ವಹಣಾಧಿಕಾರಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಕಲೆಗೆ 10 ವರ್ಷಗಳಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾನಮಾನ ನೀಡಿದೆ. ನಮ್ಮೆಲ್ಲರನ್ನು ಒಗ್ಗೂಡಿಸಿಕೊಂಡು ಭಾಗವತ ಪಟ್ಲರು ಪ್ರತೀವರ್ಷ ಕಲಾವಿದರ ನೆರವಿಗಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಪ್ರಧಾನ ಸಂಚಾಲಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ಪ್ರಾರಂಭವಾಗಿದ್ದ ಈ ಸಂಘಟನೆಯು ಇಂದು ಸಮಾಜದ ಎಲ್ಲ ವರ್ಗದ ಜನರ ಕಣ್ಣೀರು ಒರೆಸುವಲ್ಲಿ ಯಶಸ್ವಿಯಾಗಿದೆ ಎಂದರು.
ಟ್ರಸ್ಟ್‌ನ ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡ ಮಾತನಾಡಿ, ಈ ಬಾರಿ ದಾನಿಗಳ ನೆರವಿನಿಂದ 10 ಕೋಟಿ ರೂ. ಒಟ್ಟುಮಾಡಿ ಅದನ್ನು ಎಫ್ ಡಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪ್ರತೀವರ್ಷ ಕಲಾವಿದರ ಅಭ್ಯುದಯಕ್ಕಾಗಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಇದಕ್ಕಾಗಿ ದಾನಿಗಳು ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಮಾತಾಡಿ, ದಾನಿಗಳು ನೀಡಿರುವ ಸಹಕಾರದಿಂದ ನಮ್ಮ ಟ್ರಸ್ಟ್ ಯಶಸ್ವಿಯಾಗಿ ನಡೆಯುತ್ತಿದೆ. ಪಟ್ಲ ಟ್ರಸ್ಟ್‌ನ ಯಕ್ಷ ಶಿಕ್ಷಣ ಅಭಿಯಾನದಡಿಯಲ್ಲಿ 6 ಜಿಲ್ಲೆಗಳ ಮಕ್ಕಳಿಗೆ 4 ವರ್ಷಗಳಲ್ಲಿ ಸುಮಾರು 9,000 ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿದೆ. ಇದೇ ತಿಂಗಳ 31ರಂದು 21 ಶಾಲೆಗಳ ಒಟ್ಟು 929 ಮಕ್ಕಳು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಡ್ಡೂರು ಫಾರ್ಮ್ ನಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಲಿದ್ದಾರೆ. ಶಾಸಕರಾದ ಡಾ| ಭರತ್ ಶೆಟ್ಟಿ ರಾಜೇಶ್ ನಾಯಕ್ ನೇತೃತ್ವ ವಹಿಸಲಿದ್ದಾರೆ ಎಂದರು.
ಟ್ರಸ್ಟ್‌ನ ಪುರುಷೋತ್ತಮ ಭಂಡಾರಿ ಮಾತನಾಡಿದರು. ಏಕೆ ಸಮೂಹ ಸಂಸ್ಥೆಗಳ ಸ್ಥಾಪಕ ಉದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ತೋನ್ನೆ, ಆನಂದ ಶೆಟ್ಟಿ ಬಿಲ್ಲಾಡಿ, ಅಶೋಕ್ ಶೆಟ್ಟಿ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಂಬಯಿ ಹೊಟೇಲ್ ಉದ್ಯಮಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಸೀತಾರಾಮ್ ರೈ ಸವಣೂರು, ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ವಂದಿಸಿದರು.
ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಜರಗಿದ ಆಶಾ ಪ್ರಕಾಶ್ ಸಹಾಯ ಹಸ್ತ ಯೋಜನೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟನ ಕಾರ್ಯವೈಖರಿಯನ್ನು ಗುರುತಿಸಿ ರೂ 5.00 ಲಕ್ಷ ಮೊತ್ತವನ್ನು ದೇಣಿಗೆ ರೂಪದಲ್ಲಿ ಪ್ರಧಾನ ಮಾಡಲಾಯಿತು.