ಉಪ್ಪಿನಂಗಡಿ ಪರಿಸರದ 34 ನೆಕ್ಕಿಲಾಡಿ ನಿವಾಸಿ ತೆಂಕುತಿಟ್ಟಿನ ಅಗ್ರಮಾನ್ಯ ಹಿರಿಯ ಕಲಾವಿದರಾದ ಶ್ರೀಮಾನ್ ಕುಂಬ್ಳೆ ಶ್ರೀಧರ ರಾವ್ ಇವರ ಆಕಸ್ಮಿಕ ನಿಧನಕ್ಕೆ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಉಪ್ಪಿನಂಗಡಿಯ ಶ್ರೀಗುರು ಸುದೀಂದ್ರ ಕಲಾಮಂದಿರದಲ್ಲಿ ಜರಗಿತು.
ಶ್ರೀರಾಮ ಶಾಲೆಯ ಸಂಚಾಲಕರಾದ ಶ್ರೀ ಯು.ಜಿ ರಾಧ ಇವರು ನುಡಿನಮನ ಸಲ್ಲಿಸುತ್ತಾ ಶ್ರೀಧರಣ್ಣ ಇವರು ಕಲಾವಿದರಾಗಿ ಹೆಸರುಗಳಿಸುವುದಕ್ಕಿಂತಲೂ ಹೆಚ್ಚು ಅವರು ಮಾಡಿದ ಪಾತ್ರಗಳು ಧ್ವನಿಯಾಗಿ ಹೆಸರವಾಸಿಯಾಗಿ ಜೀವಕಳೆ ತಂದ ಅದ್ಭುತ ಕಲೆಗಾರ ಎಂದು ಬಣ್ಣಿಸಿದರು. ಶ್ರೀಧರ ರಾವ್ ಎಂಬ ಯಕ್ಷರಂಗದ ಅಮೂಲ್ಯ ರತ್ನವೊಂದು ಕಳಚಿಕೊಂಡುದು ಯಕ್ಷಗಾನಕ್ಕೆ ಬಲು ದೊಡ್ಡ ನಷ್ಟ ಎಂದು ಅವರ ಸಹೃದಯತೆ, ಹೃದಯ ವೈಶಾಲ್ಯತೆ, ಕಲೆಯ ಪ್ರೀತಿ ವಿಶ್ವಾಸವು ಮುಂದಿನ ಯುವ ಯಕ್ಷಗಾನ ಕಲಾವಿದರಿಗೆ ಸ್ಪೂರ್ತಿದಾಯಕವಾಗಿರಲೆಂದು ಆಶಿಸಿದರು.
ಯಕ್ಷ ಸಂಗಮ ಉಪ್ಪಿನಂಗಡಿಯ ಕೃಷ್ಣ ಮಲ್ಲಿಗೆ ಮಾತನಾಡುತ್ತಾ ತನ್ನ ಮತ್ತು ಶ್ರೀಧರಣ್ಣನ ಜೊತೆ ಸುಮಾರು 25 ವರ್ಷಗಳ ಒಡನಾಟ ಸ್ಮರಿಸಿಕೊಂಡರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ಯವರು ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಕುಂದು ಕೊರತೆಗಳಿದ್ದರೂ ಅದಕ್ಕೆ ಅಪವಾದವೆಂಬಂತೆ ತನ್ನ ಜೀವನ ಮತ್ತು ವೃತ್ತಿಯಲ್ಲಿ ಎಂದೂ ಕಪ್ಪುಚುಕ್ಕೆ ಬಾರದಂತೆ ಜಾಗ್ರತೆ ವಹಿಸಿದ ಅಗ್ರಮಾನ್ಯ ಕಲಾವಿದರಲ್ಲಿ ಅಗ್ರಗಣ್ಯ ಕಲಾವಿದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಕೆ. ಜಗದೀಶ ಶೆಟ್ಟಿಯವರು ತಾನು ಯಕ್ಷಗಾನದ ಕಡೆಗೆ ಆಸಕ್ತಿ ಮೂಡಿದ ನಂತರದಲ್ಲಿ ಪರಿಚಯವಾದ ಕುಂಬ್ಳೆ ಶ್ರೀಧರ ರಾವ್ ಇವರ ಪ್ರೀತಿ ವಿಶ್ವಾಸದ ಮಾತು ಹಾಗೂ ಘಟಕದ ಕಾರ್ಯಕ್ರಮಗಳಲ್ಲಿ ಅವರ ಸಕ್ರೀಯ ಭಾಗವಹಿಸುವಿಕೆ ಮತ್ತು ಪ್ರೋತ್ಸಾಹವನ್ನು ನೆನಪಿಸಿ ನಮ್ಮೂರ ಅತ್ಯುನ್ನತ ಕಲಾವಿದರನ್ನು ಕಳೆದುಕೊಂಡ ದುಃಖವನ್ನು ಯಕ್ಷ ರಂಗ ಮತ್ತು ಅವರ ಸಂಸಾರಕ್ಕೆ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಹಲವಾರು ಯಕ್ಷಗಾನಾಭಿಮಾನಿಗಳು, ಘಟಕದ ಸದಸ್ಯರು ಭಾಗವಹಿಸಿ ಸಂತಾಪ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ರವೀಶ ಎಚ್ ಟಿ ನಿರೂಪಿಸಿದರು.