ಬೆಳ್ತಂಗಡಿ: ಯಕ್ಷಗಾನಕ್ಕೆ ಹೊಸ ಆಯಾಮ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ್ ಶೆಟ್ಟಿ ಅವರು. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ. ಅದರಲ್ಲಿ ಶಶಿಧರ್ ಶೆಟ್ಟಿ ಅವರಿಗೆ ಅವರ ತಾಯಿ ಕಾಶಿ ಶೆಟ್ಟಿ ಅವರ ಆಶೀರ್ವಾದದಿಂದ ಬಂದಿದೆ ಎಂದು ಹರೀಶ್ ಪೂಂಜ ಅಭಿಪ್ರಾಯಪಟ್ಟರು.
ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಬೆಳ್ತಂಗಡಿ ಘಟಕದಿಂದ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ರಾತ್ರಿ ಜರಗಿದ ಯಕ್ಷಸಂಭ್ರಮ-2024 ಪ್ರಶಸ್ತಿ ಪ್ರಧಾನ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನವನ್ನು ಈ ರೀತಿಯೂ ನಡೆಸಬಹುದು ಎಂದು ಕಲ್ಪನೆ ಬೆಳ್ತಂಗಡಿಗೆ ನೀಡುವ ಮೂಲಕ ಬೆಳ್ತಂಗಡಿಯ ಜನತೆ ಹಿಂದೆಂದೂ ಕಂಡಿರದಂತಹ ಯಕ್ಷಲೋಕಕ್ಕೆ ಕರೆದೊಯ್ದಿದ್ದಾರೆ. ಜಗತ್ತಿನಲ್ಲಿ ಕಲೆ ಹಾಗೂ ಚಲನಚಿತ್ರವನ್ನು ಇಂದು ತುಳುವರು ಆಳುತ್ತಿದ್ದಾರೆ ಎಂಬುದು ಸಂತಸದ ವಿಷಯ. ಯಕ್ಷಗಾನ ಕಲೆಯ ಮೂಲಕ ಎಲ್ಲ ಜಾತಿ, ಧರ್ಮವನ್ನು ಒಗ್ಗೂಡಿಸುವ ಕೆಲಸವಾಗಿದೆ ಎಂದು ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, 25 ವರ್ಷದ ವೃತ್ತಿ ಜೀವನದ ಇತಿಹಾಸದಲ್ಲಿ ಯಕ್ಷಗಾನಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಸಂಯೋಜಿಸಿರುವುದು ಇದೇ ಪ್ರಥಮ, ಕರ್ನಾಟಕದಾದ್ಯಂತ ನಮ್ಮ ಫೌಂಡೇಶನ್ ನಿಂದ 9 ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯಲ್ಲಿ ನಿರತರಾಗಿದ್ದಾರೆ. ಹಾಗಾಗಿ ಪಟ್ಲ ಫೌಂಡೇಶನ್ ಬೆನ್ನೆಲುಬು ಶಶಿಧರ್ ಶೆಟ್ಟಿ ಬರೋಡಾ ಎಂದರು.
ಚಲನಚಿತ್ರ ನಟ ರಾಜ್ ಬಿ.ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಸಂಸ್ಕೃತಿ ಸಂಸ್ಕಾರ ಉಳಿಸಿ, ಬೆಳೆಸುವ ಮನಸ್ಸುಗಳು ನಮಗೆ ಬೇಕು. ಅದು ಕರಾವಳಿಯಲ್ಲಿ ಜೀವಂತವಾಗಿದೆ ಎಂಬುದಕ್ಕೆ ಯಕ್ಷಸಂಭ್ರಮ ಸಾಕ್ಷಿ ಎಂದರು. ನಟಿ ಸಂಯುಕ್ತ ಹೊರನಾಡು, ಅಮೆರಿಕಾ ಉದ್ಯಮಿ ಮಂಜುನಾಥ್ ಶೆಟ್ಟಿ, ಪಟ್ಲ ದೆಹಲಿ ಘಟಕ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ, ಕೇಂದ್ರ ಸಮಿತಿ ಪುರುಷೋತ್ತಮ ಅಡ್ಯಾರ, ಕೇಂದ್ರ ಸಮಿತಿ ಕೋಶಾಧಿಕಾರಿ ಸುದೇಶ್, ರವಿಚಂದ್ರ ಶೆಟ್ಟಿ, ಪಟ್ಲ ಮಹಾಬಲ, ಮುನಿಯಾಲು ಉದಯ ಕುಮಾರ ಶೆಟ್ಟಿ, ಘಟಕದ ಕಾರ್ಯದರ್ಶಿ ಶಿತಿಕಂಠ ಭಟ್, ಕೋಶಾಧಿಕಾರಿ ಆದರ್ಶ್ ಜೈನ್, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಘಟಕ ಗೌರವಾಧ್ಯಕ್ಷ, ಬರೋಡಾ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ಓರ್ವ ಕಲಾವಿದನೇ ಇನ್ನೋರ್ವ ಕಲಾವಿದನ ಪರಿಸ್ಥಿ ತಿಯನ್ನು ತಿಳಿಯಲು ಸಾಧ್ಯ. ಪಟ್ಲ ಘಟಕವು 10 ವರ್ಷ ಪೂರೈಸುವ ಸುಸಂದರ್ಭದಲ್ಲಿ ಕಲಾಪೋಷಕರಿಂದ 10 ಕೋ.ರೂ. ಧನ ಸಂಗ್ರಹಿಸಿ ಫೌಂಡೇಶನ್ ಗೆ ನೀಡುವ ಗುರಿ ಹೊಂದಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮದ ಆರಂಭವಷ್ಟೆ. ಮುಂದೆ ಇದಕ್ಕಿಂತಲೂ ಸಂಭ್ರಮದಿಂದ ಕಾರ್ಯಕ್ರಮ ನಡೆಸಲಾಗುವುದು ಎಂದು ಘೋಷಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಯಕ್ಷಗಾನ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ಈ ಬಾರಿಯ ಯಕ್ಷ ಸಂಭ್ರಮ -2024 ಪ್ರಶಸ್ತಿ ಪ್ರದಾನಿಸಲಾಯಿತು. ಹಿರಿಯ ವೈದ್ಯ ಗುರುವಾಯನಕೆರೆಯ ಡಾ| ವೇಣುಗೋಪಾಲ್ ಶರ್ಮ ಹಾಗೂ ಬೆಳ್ತಂಗಡಿ ಧನುವಂತರಿ ಆಯುರ್ವೇದ ಕ್ಲಿನಿಕ್ ಹಿರಿಯ ವೈದ್ಯ ಡಾ| ಕೆ.ಜಿ. ಪಣಿಕರ್‌ಗೆ ಗೌರವ ಸಮ್ಮಾನ, ನಿಡ್ಲೆ ಅಗ್ರಿಲೀಫ್ ಪ್ರೈ.ಲಿ. ಸಂಸ್ಥಾಪಕ ಅವಿನಾಶ್ ರಾವ್, ಸಹಸ್ಥಾಪಕ ಅತಿಶಯ ಜೈನ್ ಅವರನ್ನು ಸಾಧಕರ ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಚ ಶಂಕರ್ ಭಟ್ ಅವರನ್ನು ಗೌರವಿಸಲಾಯಿತು. ಯಕ್ಷಗಾನದಲ್ಲಿ 25 ವರ್ಷ ಪೂರೈಸಿದ ಯಕ್ಷಧ್ರುವ ಪಟ್ಲ ಫೌಂಡೇ ಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರಿಗೆ ಬೆಳ್ತಂಗಡಿ ಘಟಕದಿಂದ ಸಮ್ಮಾನಿಸಲಾಯಿತು. ಡಿ.14 ರಂದು ಮೃತಪಟ್ಟ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯ ಅವರಿಗೆ ಘಟಕದಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು. ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು. ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.