ಬೆಳ್ತಂಗಡಿ, ಡಿ. 14: ಗುಣಾತ್ಮಕ ಶಿಕ್ಷಣಕ್ಕೆ ಯಕ್ಷಗಾನ ಪೂರಕ ಕಲೆ. ಪ್ರತಿವರ್ಷ ಶಿಕ್ಷಣ ಇಲಾಖೆಯಿಂದ ಪ್ರತಿಭಾ ಕಾರಂಜಿ ನಡೆಸಲಾಗುತ್ತಿದೆ. ಆದರೆ ಈವರೆಗೆ ಯಕ್ಷಗಾನ ಸೇರ್ಪಡೆಯಾಗಿರಲಿಲ್ಲ. ಮುಂದೆ ಪ್ರತಿಭಾ ಕಾರಂಜಿಯಲ್ಲೂ ಯಕ್ಷಗಾನ ಸೇರ್ಪಡೆಗೊಳಿಸುವಂತೆ ಇಲಾಖೆಗೆ ನಾನು ಮನವಿ ಮಾಡುತ್ತೇನೆ ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಹೇಳಿದರು.
ಮಂಗಳೂರು ಯಕ್ಷಧ್ರುವ ಪಟ್ಟ ಫೌಂಡೇಶನ್ ಇದರ ಬೆಳ್ತಂಗಡಿ ಘಟಕದಿಂದ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಡಿ.14ರಂದು ಹಮ್ಮಿಕೊಂಡ ಯಕ್ಷಸಂಭ್ರಮ-2024ನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನದಿಂದ ಜೀವನ ಶಿಕ್ಷಣದ ಜತೆಗೆ ಶಿಸ್ತು, ಸಂಯಮ, ಬಣ್ಣಗಾರಿಕೆ, ವೇಷಗಾರಿಕೆ ಇವೆಲ್ಲವೂ ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಪೌರಾಣಿಕ ವಿಷಯದ ಮೂಲಕ ಕನ್ನಡ ಭಾಷಾ ಪ್ರೌಢಿಮೆಯನ್ನು ಬೆಳೆಸುತ್ತದೆ. ಇದು ಎಲ್ಲ ಶಾಲೆಗಳಲ್ಲೂ ಯಕ್ಷಗಾನ ಶಿಕ್ಷಣ ಬೆಳೆಸುವಂತಾಗಬೇಕು ಎಂದ ಆಶಿಸಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ಇದರ ಗೌರವಾಧ್ಯಕ್ಷ ಹಾಗೂ ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ಯಕ್ಷಸಂಭ್ರಮ ಕಾರ್ಯಕ್ರಮದ ಮೂಲಕ ಯಕ್ಷಗಾನವು ಎಲ್ಲೆಡೆ ತಲುಪುವಂತಾಗಿದೆ ಎಂಬುದು ಅತ್ಯಂತ ಖುಷಿ ತಂದಿದೆ. ತುಳುನಾಡಿನ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಜತೆಗೆ ಅವರನ್ನು ಒಂದು ತಾರೆಯರನ್ನಾಗಿಸಬೇಕು ಎಂದು ಕರೆ ನೀಡಿದರು.
ಉದ್ಯಮಿ, ಉಜಿರೆ ಲಕ್ಷ್ಮೀ ಗ್ರೂಪ್‌ನ ಮೋಹನ್ ಕುಮಾರ್ ಮಾತನಾಡಿ, ಯಕ್ಷಸಂಭ್ರಮವನ್ನು ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಪ್ರದರ್ಶನಗೊಳಿಸುವ ಮೂಲಕ ಯಕ್ಷ ಜಾತ್ರೆಯಾಗಿ ಮೂಡಿಬರಬೇಕು ಎಂದರು. ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ಮಾತನಾಡಿ, ಭಾಷಾ ಶುದ್ದಿ, ಮಾನಸಿಕ ಧೈರ್ಯ, ಆತ್ಮಸ್ಥೆರ್ಯ, ಏಕಾಗ್ರತೆ ಯಕ್ಷಗಾನದಲ್ಲಿದೆ. ಈ ಸಂಕಲ್ಪದೊಂದಿಗೆ ಯಕ್ಷಶಿಕ್ಷಣ ಆರಂಭಿಸಲಾಯಿತು. ಆರಂಭದಲ್ಲಿ 38 ಶಾಲೆಗಳಲ್ಲಿ 4 ರಿಂದ 5 ಸಾವಿರ ವಿದ್ಯಾರ್ಥಿಗಳಿದ್ದರು. ಪ್ರಸಕ್ತ 86 ಶಾಲೆಗಳಿಂದ ಏಳರಿಂದ ಎಂಟು ಸಾವಿರ ಮಕ್ಕಳು ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಪಟ್ಲ ಯಕ್ಷ ಶಿಕ್ಷಣ ಕ್ರಾಂತಿಯಲ್ಲಿ ನವಶಕ್ತಿಯೊಂದು ಸೇರಿದೆ ಎಂದರು.
ಯಕ್ಷ ಗುರುಗಳಾದ ಈಶ್ವರ್ ಪ್ರಸಾದ್, ದೇವಿ ಪ್ರಸಾದ್, ಅರುಣ್ ಕುಮಾರ್ ಅವರಿಗೆ ಗೌರವ ಸಮ್ಮಾನ ಸಲ್ಲಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉದ್ಯಮಿ ಜಯರಾಮ್ ಶೆಟ್ಟಿ ಬೆಳ್ತಂಗಡಿ ಘಟಕ ಸ್ಥಾಪಕಾಧ್ಯಕ್ಷರಾದ ಬಿ.ಭುಜಬಲಿ, ರಘುರಾಮ ಶೆಟ್ಟಿ ಕಾರ್ಯದರ್ಶಿ ಚಿಕಂಠ ಭಟ್ ಉಜಿರೆ, ಕೋಣಾಧಿಕಾರಿ ಆದರ್ಶ್ ಜೈನ್, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಲ್ಯಾಲ ಸ್ವಾಗತಿಸಿದರು. ಉಪನ್ಯಾಸಕ ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.