ಯಕ್ಷಗಾನ, ನಾಟಕ ಕಲಾವಿದರಿಗೆ ಸುಮಾರು 15 ಕೋಟಿ ರೂ. ವರೆಗೆ ನೆರವು ನೀಡಿರುವ ಹೆಮ್ಮೆ, ಯಕ್ಷಗಾನ ಕಲಾವಿದನಾದ ತನಗೆ ಇದೆ. ಇದಕ್ಕೆ ಅಭಿಮಾನಿಗಳ ಪ್ರೋತ್ಸಾಹವೇ ಕಾರಣ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಸುರತ್ಕಲ್ ಬಂಟರ ಭವನ ವಠಾರದಲ್ಲಿ ಶನಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ, ಸ್ಟಾರ್ ವ್ಯಾಲ್ಯೂ ಬಂದಿದ್ದು, ಅದನ್ನು ಉಳಿಸಲು ನಾವು ಮುಂದಾಗಬೇಕು ಎಂದು ಉದ್ಯಮಿ ಅಗರಿ ರಾಘವೇಂದ್ರ ರಾವ್ ಹೇಳಿದರು. ಯಕ್ಷಗಾನ ಸಾಧಕರಾದ ಪುತ್ತಿಗೆ ರಘುರಾಮ ಹೊಳ್ಳ(ಭಾಗವತಿಕೆ), ಶಂಕರ ನಾರಾಯಣ ಮೈರ್ಪಾಡಿ (ಯಕ್ಷಗುರು), ಶ್ರೀಧರ್ ಶೆಟ್ಟಿ ಕೊಕ್ಕಾರು ಗುತ್ತು ಪೆರ್ಮುದೆ (ಅರ್ಥಧಾರಿ), ಜಗದೀಶ್ ಆಚಾರ್ಯ ಜೋಕಟ್ಟೆ (ತಿರುಗುವ ರಂಗಸ್ಥಳ ಖ್ಯಾತಿ), ಕೃಷ್ಣಪ್ಪ ಪೂಜಾರಿ ಬೊಟ್ಟಿಕೆರೆ ಸೂರಿಂಜೆ (ಯಕ್ಷಗಾನ ಸೇವೆ), ಜನಾರ್ದನ ಡಿ.ಶೆಟ್ಟಿಗಾರ್ ಸುರತ್ಕಲ್ (ನೇಪಥ್ಯ ಕಲಾವಿದ) ಅವರಿಗೆ ಗೌರವಾರ್ಪಣೆ ಸನ್ಮಾನ ನಡೆಯಿತು.
ವೇದಮೂರ್ತಿ ಐ. ಶಂಕರನಾರಾಯಣ ಭಟ್ ಇಡ್ಯಾ ಉದ್ಘಾಟಿಸಿದರು. ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಉದ್ಯಮಿ ಡಿ.ಕೆ.ಶೆಟ್ಟಿ ಮನೋಹರ್ ಶೆಟ್ಟಿ ಸೂರಿಂಜೆ, ಜಗದೀಶ್ ಶೆಟ್ಟಿ-ಪೆರ್ಮುದೆ, ಶ್ರೀಕಾಂತ್ ಕಾಮತ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ ಪೂರ್ಣಿಮಾ ಯತೀಶ ರೈ, ಪದಾಧಿಕಾರಿಗಳಾದ ಲೀಲಾಧರ್ ಶೆಟ್ಟಿ ವಿನಯ ಆಚಾರ್ಯ ಹೊಸಬೆಟ್ಟು, ಜಗನ್ನಾಥ ಶೆಟ್ಟಿ ಬಾಳ, ಟಿ.ಎನ್.ರಮೇಶ್ ಮತ್ತಿತರರಿದ್ದರು. ಘಟಕದ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ ಸ್ವಾಗತಿಸಿದರು. ಪ್ರದೀಪ್ ಆಳ್ವ ಕದ್ರಿ ಪ್ರಾಸ್ತಾವಿಕ ಮಾತನಾಡಿದರು. ಸುಧಾ ಚಂದ್ರಶೇಖರ್ ಶೆಟ್ಟಿ ನಿರೂಪಿಸಿದರು ಬಿ. ಗಂಗಾಧರ್ ಪೂಜಾರಿ ವಂದಿಸಿದರು. ಅನೂಪ ಶೆಟ್ಟಿ ಕಟ್ಲ ಪ್ರಾರ್ಥಿಸಿದರು.