ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ಅದ್ದೂರಿ ಕಾರ್ಯಕ್ರಮ | ಹಿಮ್ಮೇಳದ ಅಬ್ಬರಕ್ಕೆ ವಿದ್ಯಾರ್ಥಿಗಳ ಧಿಗಿಣ
ಬಂಟ್ವಾಳ: ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಒಡ್ಡೂರು ಫಾರ್ಮ್ ಹೌಸ್‌ನ ಮೈದಾನದಲ್ಲಿ ಹಾಕಲಾದ ಎರಡು ವೇದಿಕೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನದ ಬೆಂಡೆ, ಮದ್ದಳೆ, ಹಿಮ್ಮೇಳದ ಅಬ್ಬರಕ್ಕೆ ವಿವಿಧ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಧಿಗಿಣ, ನಾಟ್ಯ, ಕುಣಿತದ ಮೂಲಕ ಗಮನಸೆಳೆದರು.
ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೂ ನಡೆದ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ-25 ರಲ್ಲಿ ಬಂಟ್ವಾಳ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಸುಮಾರು 20 ಸರಕಾರಿ ಶಾಲೆಯ ಒಟ್ಟು 1000 ವಿದ್ಯಾರ್ಥಿಗಳು ಅದ್ದೂರಿಯಗಿ ರಂಗಪ್ರವೇಶಗೈದು ತಮ್ಮ ಕಲಾಪ್ರೌಢಿಮೆಯನ್ನು ಪ್ರಸ್ತುತ ಪಡಿಸಿದರು. ಯಕ್ಷದ್ರವ ಪಟ್ಟ ಫೌಂಡೇಶನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮತ್ತು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಧ್ರುವ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಆಯೋಚಿಸಲಾಗಿತ್ತು.
ಯಕ್ಷಧ್ರುವ ಪಟ್ಟ ಫೌಂಡೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ಜಿಲ್ಲೆಯ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗುರುಗಳು ಯಕ್ಷಶಿಕ್ಷಣ ತರಬೇತಿ ನೀಡಲಾಗುತ್ತಿದ್ದು, ಹೀಗೆ ತರಬೇತಿ ಪಡೆದ ವಿದ್ಯಾರ್ಥಿಗಳ ರಂಗಪ್ರವೇಶಕ್ಕೆ ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ಶಾಸಕದ್ವಯರಾದ ರಾಜೇಶ್ ನಾಯಕ್ ಮತ್ತು ಡಾ.ವೈ. ಭರತ್ ಶೆಟ್ಟಿ ಅವರು ವೇದಿಕೆ ನಿರ್ಮಿಸಿಕೊಟ್ಟಿದ್ದರು. ವಿದ್ಯಾರ್ಥಿಗಳಿಗೆ ಯಕ್ಷಗಾನಕ್ಕೆ ಬೇಕಾದ ವೇಷಭೂಷಣ, ಊಟೋಪಾಚಾರ ಸಹಿತ ಎಲ್ಲಾ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರೇ ಖುದ್ದು ಮುತುವರ್ಜಿ ವಹಿಸಿ ವ್ಯವಸ್ಥೆ ಕಲ್ಲಿಸಿದ್ದರು.
ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರದ 10 ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಕೀರ್ತಿಶೇಷ ಡಾ.ವೈ. ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ 10 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ರಂಗ ಪ್ರವೇಶಗೈದರು. ವಿದ್ಯಾರ್ಥಿಗಳಿಂದ ಪೂರ್ವರಂಗಪ್ರವೇಶ ಸಹಿತ ವಿವಿಧ ಪೌರಾಣಿಕ ಕಥಾ ಪ್ರಸಂಗಗಳಿಂದ ಆಯ್ತು ತುಣುಕಗಳು ಪ್ರದರ್ಶನಗೊಂಡಿತು. ಪ್ರತಿಶಾಲೆಗೂ ತಲಾ 50 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿತ್ತು.
ಯಕ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಿಮ್ಮೇಳಕ್ಕೆ ತಕ್ಕಂತೆ ನಾಟ್ಯ, ಧಿಗಿಣ ಹಾಕುವುದರೊಂದಿಗೆ ತಮ್ಮ, ತಮ್ಮ ಪಾತ್ರಕ್ಕೆ ಜೀವತುಂಬಿ ಸೈ ಎನಿಸಿಕೊಂಡರು. “ಬೆಳಗ್ಗೆ ಏಕಕಾಲದಲ್ಲಿ ಚೌಕಿ ಪೂಜೆ ನಡೆದ ಬಳಿಕ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ ಮತ್ತು ಡಾ.ವೈ. ಭರತ್ ಶೆಟ್ಟಿ ಸಮ್ಮಿಲನವನ್ನು ಉದ್ಘಾಟಿಸುವ ಮೂಲಕ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಆಡ್ಯಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಪ್ರಧಾನ ಕಾರ್ಯದರ್ಶಿ ದೇವದಾಸ ಶೆಟ್ಟಿ ಬಂಟ್ವಾಳ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮೊದಲಾದವರಿದ್ದರು. ತಮ್ಮ ಯಕ್ಷ ಪ್ರದರ್ಶನದ ಬಳಿಕ ವಿದ್ಯಾರ್ಥಿ ಸಮೂಹ, ಶಿಕ್ಷಕ, ಶಿಕ್ಷಕಿಯರು ಫಾರ್ಮ್ ಹೌಸ್ ಸುತ್ತಾಡಿ, ಇಲ್ಲಿನ ಕೃಷಿ ಚಟುವಟಿಕೆ, ಸ್ವಿಮ್ಮಿಂಗ್ ಪೂಲ್, ಗೋವು, ಸಿಎನ್‌ಜಿ ಘಟಕವನ್ನು ವೀಕ್ಷಿಸಿ ಖುಷಿಪಟ್ಟರು.