ಉದ್ಯಮಿ ಮೋಹನ್ ಕುಮಾರ್ ಅಭಿಮತ | ಗುರುವಾಯನಕೆರೆಯಲ್ಲಿ ಯಕ್ಷ ಸಂಭ್ರಮ ಉದ್ಘಾಟನೆ
ಯಕ್ಷಗಾನ ಶ್ರೀಮಂತ ಕಲೆಯಾಗಿದೆ. ಕಲೆಗೆ, ಕಲಾವಿದರ ಬದುಕಿಗೆ ಹೊಸ ರೂಪ ಕೊಟ್ಟವರು ಸತೀಶ್ ಶೆಟ್ಟಿ ಪಟ್ಲ. ಯಕ್ಷಧ್ರುವ ಪಟ್ಲ ಫೌಂಡೇಷನ್ ಗೆ ಶಕ್ತಿಯಾಗಿ ನಿಂತ ಉದ್ಯಮಿ ಶಶಿಧರ ಶೆಟ್ಟಿಯವರು ತಾಲೂಕಿನಲ್ಲಿ ಯಕ್ಷ ಸಂಭ್ರಮ ನಡೆಸಿ ಕಲೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಇಂತಹ ಯಕ್ಷ ಸಂಭ್ರಮ ಗ್ರಾಮ ಗ್ರಾಮದಲ್ಲಿ ನಡೆದು ಗ್ರಾಮೀಣ ಜನರಿಗೆ ಯಕ್ಷಗಾನದ ರಸದೌತಣ ಉಣಿಸಲಿ ಎಂದು ಉದ್ಯಮಿ, ಬದುಕು ಕಟ್ಟೋಣ ತಂಡದ ಸಂಚಾಲಕ, ಲಕ್ಷ್ಮೀ ಇಂಡಸ್ಟ್ರೀಸ್ ಮಾಲೀಕ ಮೋಹನ್ ಕುಮಾರ್ ಹೇಳಿದರು.
ಗುರುವಾಯನಕೆರೆ ಶಕ್ತಿನಗರದಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಷನ್ ಮಂಗಳೂರು ಬೆಳ್ತಂಗಡಿ ಘಟಕ ವತಿಯಿಂದ ಉದ್ಯಮಿ ಶಶಿಧರ ಶೆಟ್ಟಿ ಸಾರಥ್ಯದಲ್ಲಿ ಶನಿವಾರ ನಡೆದ ಯಕ್ಷಸಂಭ್ರಮ-2024 ಕಾರ್ಯಕ್ರಮದಲ್ಲಿ ಮಾತನಾಡಿದರು. ಯಕ್ಷಗಾನ ನೋಡುವುದಕ್ಕೆ ಸೀಮಿತವಾಗಿರದೆ ಸಾವಿರಾರು ಮಕ್ಕಳಿಗೆ ಯಕ್ಷಗಾನ ಕಲಿಸುವ ಮೂಲಕ ಮಕ್ಕಳಲ್ಲಿ ಕಲಾಭಿರುಚಿ ಮೂಡಿಸಿರುವುದು ಹೆಮ್ಮೆಯ ವಿಷಯ. ಈ ದಿನ ಎಂಟು ಶಾಲೆಗಳ 500ಕ್ಕೂ ಅಧಿಕ ಮಕ್ಕಳಿಗೆ ರಂಗ ಪ್ರವೇಶ ಮಾಡುವ ಭಾಗ್ಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಭ್ರಮದೊಂದಿಗೆ ಯಕ್ಷಗಾನ ಕಲೆ ಬೆಳಗಲಿ ಎಂದು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಯಕ್ಷ ಸಂಭ್ರಮದ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಿದ್ದರು. ಭುಜಬಲಿ ಧರ್ಮಸ್ಥಳ ಶುಭ ಹಾರೈಸಿದರು. ಯಕ್ಷ ಸಂಭ್ರಮದ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯದರ್ಶಿ ಶಿತಿಕಂಠ ಭಟ್ ಉಜಿರೆ, ಕೋಶಾಧಿಕಾರಿ ಆದರ್ಶ್ ಜೈನ್, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ, ಉದ್ಯಮಿ ಜಯರಾಮ ಶೆಟ್ಟಿ, ವಾಸುದೇವ ಐತಾಳ, ರಘುರಾಮ ಶೆಟ್ಟಿ ಉಜಿರೆ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಲಾಯಿಲ ಸ್ವಾಗತಿಸಿದರು. ವಾಸುದೇವ ಐತಾಳ ಪ್ರಾಸ್ತಾವಿಕ ಮಾತನಾಡಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಎನ್ ಎಸ್.ಎಸ್ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಎಂಟು ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.