ಹೊಸನಗರ: ಸಾಂಸ್ಕೃತಿಕ ಲೋಕಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಹೆಮ್ಮೆಯ ಯಕ್ಷಗಾನ ಕಲೆಯನ್ನು ಬೆಳೆಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದ್ದು ಈ ನಿಟ್ಟಿನಲ್ಲಿ ಶಾಲೆಯ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡಲು ಯಕ್ಷಧ್ರುವ ಪಟ್ಲ ಟ್ರಸ್ಟ್ ಫೌಂಡೇಶನ್ ಮುಂದಾಗಿದೆ. ಯಕ್ಷಗಾನ ಕಲೆಯನ್ನು ಗೌರವಿ ಸುವ ದೊಡ್ಡ ಜನ ಸಮೂಹದ ಮೂಲಕ ನನಗೆ ದೊರೆತಿದೆ ಇದರಿಂದ ಯಶಸ್ವಿಯಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಮಲೆನಾಡಿನಲ್ಲಿ ಬಾಲ್ಯದಲ್ಲಿಯೇ ಯಕ್ಷಗಾನವನ್ನು ಮಕ್ಕಳಿಗೆ ಕಲಿಸಬೇಕೆಂದು ಕಲೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದು. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ಎಲ್ಲರೂ ಸೇರಿ ಯಕ್ಷಗಾನ ಕಲೆ ಉಳಿಸೋಣ ಎಂದು ಎಂದು ಟ್ರಸ್ಟ್ ಸ್ಥಾಪಕ ಪಟ್ಲ ಸತೀಶ್ ಹೇಳಿದರು.
ಇಲ್ಲಿನ ಆರ್ಯಈಡಿಗ ಸಭಾಭವನದಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಯೋಜನೆಯಡಿಯಲ್ಲಿ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ 2024-25ನೇ ಉಚಿತ ಯಕ್ಷಗಾನ ತರಬೇತಿ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಾವಿರಾರು ಮಕ್ಕಳಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನದಲ್ಲಿ ಅವರಿಗೆ ವೇದಿಕೆ ಒದಗಿಸುವ ಪ್ರಯತ್ನವೂ ನಡೆಯಲಿದೆ.
ಹಿರಿಯ ಕಲಾವಿದರ ಪೈಕಿ ಕೆಲವರು ಶಾಲಾ ಶಿಕ್ಷಣ ಪಡೆಯದಿದ್ದರೂ ರಂಗದಲ್ಲಿ ಅದ್ಭುತ ಭಾಷಾ ಪಾಂಡಿತ್ಯ ವಾಕ್ ಚಾತುರ್ಯದ ಮೂಲಕ ಪ್ರಸಿದ್ದಿ ಸಂಪಾದಿಸಿದ್ದಾರೆ. ಅದುವೇ ಯಕ್ಷಗಾನ ಕಲಾವಿದರು ಕನಿಷ್ಟ ಸಂಬಳ ಪಡೆದು ಮೇಳದಲ್ಲಿ ಕೆಲಸ ಮಾಡುತ್ತಿದ್ದರು, ತಮ್ಮ ಕುಟುಂಬದ ನಿರ್ವಹಣೆಯ ಜತೆಗೆ ಕಲೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಕಲಾವಿದರು ಯಾವುದೇ ತೊಂದರೆಗೊಳಗಾಗದೇ ಬದುಕು ಸಾಗಿಸುವುದೇ ಕಷ್ಟಕರವಾಗಿತ್ತು. ಇಂತಹ ಸ್ಥಿತಿಯನ್ನು ಕಲಾವಿದರು ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಆಶಯ ಉಂಟಾಯಿತು ಎಂದರು.
ಪತ್ರಕರ್ತ ನಗರ ರಾಘವೇಂದ್ರ ಮಾತನಾಡಿ, ಹೊಸನಗರ ತಾಲೂಕಿನಲ್ಲಿ ಹತ್ತು ಶಾಲೆಗಳಲ್ಲಿ 10 ಜನ ಯಕ್ಷಗಾನ ಶಿಕ್ಷಕರನ್ನು ನೇಮಿಸಲಾಗಿದ್ದು ಅವರಿಗೆ ಪ್ರತಿ ತಿಂಗಳು 18ಸಾವಿರ ಸಂಬಳವನ್ನು ಪಟ್ಲ ಫೌಂಡೇಶನ್ ವತಿಯಿಂದ ನೀಡಲಾಗುತ್ತಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕುಬೇಂದ್ರಪ್ಪ, ಪತ್ರಕರ್ತ ನಗರ ರಾಘವೇಂದ್ರ, ಚಂದ್ರಮೌಳಿ ಗೌಡ, ಕೆ.ವಿ ಸುಬ್ರಹ್ಮಣ್ಯ, ಕೆ.ವಿ ಕೃಷ್ಣಮೂರ್ತಿ, ಡಾ.ಶಾಂತ ರಾಮ ಪ್ರಭು, ಸುಬ್ರಹ್ಮಣ್ಯ, ದುಮ್ಮ ವಿನಯ್‌ಕುಮಾರ್, ದೇವರಾಜ್, ಅಶ್ವಿನಿ ಪಂಡಿತ್ ವೆಂಕಟೇಶ್‌ಮೂರ್ತಿ, ಗೌತಮ್ ಕುಮಾರಸ್ವಾಮಿ ಇನ್ನಿತರರಯ ಉಪಸ್ಥಿತರಿದ್ದರು.