ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ.) ಮಂಗಳೂರು ಇದರ ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯ ಯಕ್ಷಗಾನ ಶಿಕ್ಷಕರ ಸಮಾಲೋಚನಾ ಸಭೆಯು ಮಂಗಳೂರಿನ ಕದ್ರಿಯಲ್ಲಿ ದಿನಾಂಕ: 17/11/2024ರ ರವಿವಾರ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರೂ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ನಿರ್ದೇಶಕರಾಗಿರುವ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯು ನಮ್ಮ ಟ್ರಸ್ಟ್ ನ ಹೆಮ್ಮೆಯ ವಿಚಾರ. ಸಾವಿರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಮೂಲಕ ಯಕ್ಷಗಾನ ಶಿಕ್ಷಣವನ್ನು ಪಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಯಕ್ಷಗಾನ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯ ನೀತಿ ಸಂಹಿತೆಗಳನ್ನು ಪ್ರಸ್ತಾಪ ಮಾಡಿದರು.
ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಯಕ್ಷಗಾನ ತರಗತಿಯ ರೂಪುರೇಷೆಗಳನ್ನು ಯಕ್ಷಗಾನ ಶಿಕ್ಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ ಯಕ್ಷಗಾನ ಶಿಕ್ಷಕರು ತಮ್ಮ ಪರಿಚಯದ ಜೊತೆಗೆ ತಮ್ಮ ತರಗತಿಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಸಭೆಯ ಪೂರ್ವಾರ್ಧ ಯಕ್ಷಗಾನ ಶಿಕ್ಷಕರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂಯೋಜಕ ದೀವಿತ್ ಎಸ್ ಕೆ ಪೆರಾಡಿ ಪ್ರದರ್ಶನದ ರೂಪುರೇಷೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಸಕ್ತ ಸಭೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ಯೋಜನೆಯಡಿ ಸೇವಾನಿರತ ದ.ಕ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಒಟ್ಟು 87 ಶಾಲೆಗಳ 32 ಶಿಕ್ಷಕರು ಭಾಗವಹಿಸಿದ್ದರು.