ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಪಟ್ಲಾ ಸತೀಶ್‌ಶೆಟ್ಟಿ ಇವರ ನೇತೃತ್ವದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆಯಾಗಿ ಯಕ್ಷಗಾನದ ತೆಂಕು ಹಾಗೂ ಬಡಗುತಿಟ್ಟಿನ ಮತ್ತು ದೈವಾರಾಧನೆಯ ಬಡ ಕಲಾವಿದರ ಪಾಲಿಗೆ ಹೊಸ ಬೆಳಕನ್ನು ನೀಡುತ್ತ ಆರೋಗ್ಯ ವಿಮೆ ಚಿಕಿತ್ಸಾ ವೆಚ್ಚ ಭರಿಸುವುದು, ಬಡ ಕಲಾವಿದರಿಗೆ ಮನೆ ಕಟ್ಟಿಸಿಕೊಡುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕಲಾವಿದರಿಗಾಗಿ ನೀಡುತ್ತಿರುವ ಪಟ್ಲ ಫೌಂಡೇಶನ್ ಜುಲೈ 9 ರಂದು ಅಮೆರಿಕ ಪ್ರವಾಸ ಕೈಗೊಂಡು ಅಮೇರಿಕಾದಲ್ಲಿ ಯಕ್ಷಗಾನ ಕಾರ್ಯಕ್ರಮ ಮತ್ತು ತರಬೇತಿ ಶಿಬಿರಗಳನ್ನು ಮಾಡಿ ಸತತ 75 ದಿನಗಳವರೆಗೆ ಅಲ್ಲಿನ ಯಕ್ಷಾಭಿಮಾನಿಗಳಿಗೆ ಈ ಕಲೆಯ ವೈಭವವನ್ನು ನೀಡುತ್ತಿದ್ದಾರೆ. ಅಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡು ಅಮೇರಿಕಾದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ರಂಗದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಸೃಷ್ಟಿಸಿದೆ.
ವಿದ್ವಾನ್ ಕಿರಣ್ ರಾವ್ ಅವರ ನೇತೃತ್ವದಲ್ಲಿ ಅಮೇರಿಕಾದ ಫೀನಿಕ್ಸ್ ನಲ್ಲಿರುವ ಪುತ್ತಿಗೆ ಮಠದ ವೆಂಕಟಕೃಷ್ಣ ದೇವಸ್ಥಾನದಲ್ಲಿ ಜುಲೈ 27ರಂದು ಪಟ್ಲ ಫೌಂಡೇಶನ್ ತಂಡದಿಂದ ಶ್ರೀದೇವಿ ಮಹಾತ್ಮ ಎಂಬ ಪೌರಾಣಿಕ ಪ್ರಸಂಗವನ್ನು ಪ್ರದರ್ಶಿಸಿ ಅಲ್ಲಿನ ಕಲಾಭಿಮಾನಿಗಳನ್ನು ಮತ್ತು ಭಾರತೀಯ ಯಕ್ಷಗಾನ ಪ್ರಿಯರನ್ನು ಮನಸೂರೆಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅರಿಜೋನಾದ ಟೆಂಪೆ ನಗರದ ಮೇಯರ್ ಶ್ರೀ ಕೋರೆ ವೊಡ್ಸ್ ಅವರು ಜುಲೈ 27ನ್ನು ಯಕ್ಷದ್ರುವ ಪಟ್ಲ ಫೌಂಡೇಶನ್ ದಿನ ಎಂದು ಘೋಷಿಸಿದ್ದಾರೆ. ಇತಿಹಾಸದಲ್ಲಿ ಕೆತ್ತಲಾದ ಈ ಮನ್ನಣೆಯನ್ನು ಜಾಗತಿಕವಾಗಿ ಭಾರತೀಯ ಯಕ್ಷಗಾನ ಕಲೆಗಳನ್ನು ಉತ್ತೇಜಿಸಿ ಯಕ್ಷಗಾನಕ್ಕೆ ಪ್ರತಿಷ್ಠೆಯ ಕಿರೀಟವನ್ನು ನೀಡಿ ಗೌರವಿಸಿದ್ದಾರೆ. ಈ ಸಂದರ್ಭವನ್ನು ಯಕ್ಷಗಾನ ಅಭಿಮಾನಿಗಳು ಹೆಮ್ಮೆಪಡುವಂತಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದರಾದ ಎಂ.ಕೆ. ರಮೇಶ್ ಆಚಾರ್ಯ ಹಾಗೂ ಶ್ರೀ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ, ತುಳುವೇರ ಚಾವಡಿ ಯಕ್ಷ ಅಭಿಮಾನಿ ಬಳಗ ರಮೇಶ್ ಶೆಟ್ಟಿ, ಯಕ್ಷ ಪ್ರೇಮಿಗಳಾದ ಬಿ.ಎಸ್. ಕಾಮತ್, ಭಾಸ್ಕರ್ ಕಾಮತ್, ಹರ್ಷ ಕಾಮತ್ ರಘುರಾಮ್ ದೇವಾಡಿಗ, ಉದಯ್ ಕಡಂಬ, ಆನಂದ್ ಶೆಟ್ಟಿ ಶ್ರೀನಿವಾಸ್ ಆಚಾರ್, ವಿ। ದತ್ತಮೂರ್ತಿ ಭಟ್, ಶಶಿ ಎಸ್ ಮಂಗಳಗಾರ್ ತಿಳಿಸಿದ್ದಾರೆ.