ಕಳೆದ 75 ದಿನಗಳಿಂದ ಉತ್ತರ ಅಮೆರಿಕದ ಮೂಲೆಮೂಲೆಗೂ ಯಕ್ಷಗಾನದ ಸವಿರುಚಿಯನ್ನು ಇಲ್ಲಿನ ಪ್ರೇಕ್ಷಕರಿಗೆ ಉಣಬಡಿಸುವುದರ ಜತೆಗೆ, ಯಕ್ಷಗಾನದ ಕಂಪನ್ನು ಎಲ್ಲೆಡೆ ಪಸರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡದ ಕಲಾವಿದರು ತಮ್ಮ ಈ ತಿರುಗಾಟದ ಕೊನೆಯ ಪ್ರದರ್ಶನವನ್ನು ಟೆಕ್ಸಾಸ್ ಡಲ್ಲಾಸ್ ನಲ್ಲಿ ಸೆ.22ರಂದು ಯಶಸ್ವಿಯಾಗಿ ಮುಗಿಸಿದರು.
ಯಕ್ಷಧ್ರುವ ಪಟ್ಟ ಫೌಂಡೇಷನ್ ಯುಎಸ್ ಎ ಸಂಘಟನೆಯ ನೇತೃತ್ವದಲ್ಲಿ ಈ ಬಾರಿ ಸುಮಾರು 21 ಕಡೆಗಳಲ್ಲಿ ಸಮರೋಪಾದಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆದದ್ದು ಒಂದು ದಾಖಲೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಯಕ್ಷಧ್ರುವ ಪಟ್ಲ ಫೌಂಡೇಷನ್ ಯುಎಸ್ಎ ಅಧ್ಯಕ್ಷರಾದ ಡಾ| ಅರವಿಂದ ಉಪಾಧ್ಯಾಯರು, ಯಕ್ಷಗಾನ ತಂಡದ ಪ್ರಯಾಣ, ಪ್ರದರ್ಶನವನ್ನು ಖರ್ಪಡಿಸಲು ಆಯಾಯ ರಾಜ್ಯದ ಸಂಘಟಕರನ್ನು ಸಂಪರ್ಕಿಸುವುದು, ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸಿವುದು ಹೀಗೆ ಹಲವಾರು ಕೆಲಸಗಳನ್ನು ಬಹಳ ತಾಳ್ಮೆಯಿಂದ ಮಾಡಿದವರಿಗೆ ಧನ್ಯವಾದ ಹೇಳಿದರು ಕಡಿಮೆಯೇ. ಹಾಗೆಯೇ ಫೌಂಡೇಶನ್ನ ಇನ್ನಿತರ ಪದಾಧಿಕಾರಿಗಳಿಗೂ ನನ್ನ ಧನ್ಯವಾದಗಳು.
“ಯಕ್ಷಧ್ರುವ ಪಟ್ಲ ಫೌಂಡೇಶನ್’ನ ಪರೋಪಕಾರಿ ಸೇವಾ ಚಟುವಟಿಕೆಗಳನ್ನು ಗಮನಿಸಿ ಫೀನಿಕ್ಸ್ ನಗರದ ಮೇಯರ್ ಜು.27ನ್ನು ಹಾಗೂ ವಿಸ್ಕಾನ್ಸಿನ್ ನಗರದ ಮೇಯರ್ ಆ.18ನ್ನು ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ’ ಎಂದು ಘೋಷಿಸಿದ್ದು ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಸ್ಎ ಇದರ ಸಾಧನೆಯ ಹಿರಿಮೆಯಲ್ಲಿ ಮತ್ತೊಂದು ಗರಿ.
ಈ ವರ್ಷದ ಪ್ರಮುಖ ಪ್ರಸಂಗ ‘ಶಾಂಭವಿ ವಿಜಯ, ಸುಮಾರು ಹನ್ನೆರಡು ಕಡೆಗಳಲ್ಲಿ ಪ್ರದರ್ಶನಗೊಂಡಿದ್ದು ಕೂಡ ಒಂದು ದಾಖಲೆಯೇ. ಹಲವಾರು ಕಡೆಯಲ್ಲಿ ನಮ್ಮೂರಿನ ಪ್ರೇಕ್ಷಕರಲ್ಲದೇ ಕನ್ನಡ ಗೊತ್ತಿಲ್ಲದ ಬಹಳ ಮಂದಿಯ ಜತೆಗೆ ಅಮೆರಿಕದವರು ಕೂಡ ಯಕ್ಷಗಾನವನ್ನು ನೋಡಿ ಪ್ರಶಂಶಿಸಿದ್ದು ವಿಶೇಷವೇ. ಸತೀಶ್ ಪಟ್ಲರ ಸಾರಥ್ಯ ದಲ್ಲಿ ಒಟ್ಟಾರೆಯಾಗಿ ಈ ಬಾರಿಯ ಅಮೆರಿಕದ ತಿರುಗಾಟ ಹಲವಾರು ಸಾಧನೆಯನ್ನು ಮಾಡಿದ್ದೂ ಎಲ್ಲ ಕಲಾವಿದಂಗೂ, ಫೌಂಡೇಶನ್ ನ ಪದಾಧಿಕಾರಿಗಳಿಗೂ ಸಂಘಟಕರಿಗೂ ಮುಖ್ಯವಾಗಿ ನಮ್ಮೂರಿನ ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಸಂದ ಜಯ. ಮುಂಬರುವ ವರ್ಷಗಳಲ್ಲಿ ಇನ್ನೂ ಹಲವಾರು ಗರಿಮೆಗಳನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡವು ಗಳಿಸಲಿ ಎಂದು ಆಶಿಸುತ್ತಾ, ಪಟ್ಲರಿಂದ ಹಲವಾರು ಉತ್ತಮ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
– ಪ್ರಶಾಂತ ಕುಮಾರ್ ಮಟ್ಟು ಮಿಚಿಗನ್